ದನಿ ಇಲ್ಲದವರ ದನಿ – ತೊಗಲ ಯೋಗಿ

ದನಿ ಇಲ್ಲದವರ ದನಿ – ತೊಗಲ ಯೋಗಿ 


ಡಾ. ಶಿವಣ್ಣ ತಿಮ್ಲಾಪುರವರ "ತೊಗಲ ಯೋಗಿ" ಕವಿತೆಗಳ ಸಂಕಲನವು ನಮ್ಮ ಸಮಾಜ ಗುರ್ತಿಸದ ಶ್ರಮಿಕರ ನೋವು–ಸಂವೇದನೆಗಳ ಬಿರುಸು ಹೊತ್ತ ಕೃತಿ. ಈ ಕವಿತೆಗಳು ಶೋಷಣೆ, ಅನ್ಯಾಯ, ನಿರ್ಲಕ್ಷ್ಯದ ಮಧ್ಯೆ ಬದುಕುತ್ತಿರುವ ಬದುಕಿಗೆ ಸಾಕ್ಷಿಯಂತಿವೆ.

ಕವಿಗಳು ತಮ್ಮ ಸರಳ ಮತ್ತು ನೈಜ ಅಭಿವ್ಯಕ್ತಿ ಶೈಲಿಯಿಂದ ಓದುಗರ ಮನಸ್ಸಿನಲ್ಲಿ ಸಂವೇದನೆಯ ಪ್ರವಾಹವನ್ನೇ ಹರಿಸುತ್ತವೆ. ಪ್ರತಿಯೊಂದು ಕವಿತೆಯೂ ಬದುಕಿನಲ್ಲಿ ನೊಂದವರ ಕಣ್ಣೋರೆಸಿ ನಮ್ಮ ಹೃದಯಕ್ಕೆ ಮುಟ್ಟುತ್ತದೆ.


---

ಶ್ರಮಿಕರ ಘನತೆ

"ತೊಗಲ ಯೋಗಿ "ಕವಿತೆಯಲ್ಲಿ ಶ್ರಮವೇ ಯೋಗ, ಕಾಯಕವೇ ತಪಸ್ಸು ಎಂಬ ಸಂದೇಶ ಎದ್ದು ಕಾಣುತ್ತದೆ. ಸಮಾಜ ನಿರ್ಲಕ್ಷಿಸಿರುವ ಕೆಲಸಗಳ ಘನತೆ ಮತ್ತು ಶ್ರೇಷ್ಠತೆಯನ್ನು ಗೌರವಿಸಲೇಬೇಕೆಂದು ಕವಿ ಮೌನವಾಗಿ ಆರ್ಭಟಿಸುತ್ತಾರೆ.

"ಹಿಟ್ಟಿನ ಗೂಡೆ "ಕವಿತೆ ಸಮುದಾಯದ ಬದುಕಿನ ಶೈಲಿಯನ್ನು ನಮ್ಮ ಕಣ್ಣೆದುರಿಗೆ ಕಟ್ಟಿಕೊಡುತ್ತದೆ.
ಜಾಡ ಮಾಲಿ ಕವಿತೆಯಲ್ಲಿನ “ಮಲಮೂತ್ರಗಳಿಂದ ನಿತ್ಯ ಅಭಿಷೇಕ” ಎಂಬ ಸಾಲುಗಳು ಅತಿ ಕೆಳಗಿನ ಹಂತದ ಶ್ರಮಿಕರ ನೋವನ್ನು ಜೀವಂತವಾಗಿ ಎತ್ತಿ ತೋರಿಸುತ್ತವೆ.


---

ನೋವುಗಳ ಪ್ರತಿಬಿಂಬ

ಪಕೀರ ಕವಿತೆಯಲ್ಲಿ ಬರುವ “ಸ್ತ್ರೀ ಸಂಕಟದ ಭ್ರೂಣ ಧರಿಸಿ, ಮೊಟ್ಟೆಯೊಡೆದ ಮಹಾತ್ಮ” ಎಂಬ ಸಾಲು ಸಮಾಜದ ನಿರ್ಲಕ್ಷಿತರ  ನೋವನ್ನು ಪ್ರತಿಬಿಂಬಿಸುತ್ತದೆ.
ಕಣ್ಣಿಲ್ಲದ ಪಂಚಭೂತಗಳು ಕವಿತೆಯಲ್ಲಿ ವ್ಯವಸ್ಥೆಯ ಕ್ರೂರತೆ, ಶೋಷಣೆಯ ಬೂಟಾಟಿಕೆ ಸ್ಪಷ್ಟವಾಗಿ ಗೋಚರಿಸುತ್ತವೆ.


---

ಸಮಾಜದ ಮುಖವಾಡ

ಬೆಳಕು ಬೇಕು ಶಾಂತಿ ಬೇಡ
 ಖಾದಿ ಬೇಕು ತತ್ವ ಬೇಡ,
 ಬಾಬಾ ಸಾಹೇಬರು ಬೇಕು ಸಮಾನತೆ ಬೇಡ.

ಎಂಬ ಸಾಲುಗಳು ಸಮಾಜದಲ್ಲಿನ ನಾಟಕೀಯತೆಯ ಮುಖವಾಡಗಳನ್ನು ಬಯಲಿಗೆಳೆಯುತ್ತವೆ.
ಬುಡ್ಡಿ ದೀಪ ಕವಿತೆಯಲ್ಲಿರುವ “ಮುಗ್ಧರ ಎದೆಗೆ ಏಣಿ ಹಾಕಿ, ಮೇಲೆ ಹೋಗಿ ಬಳಿಕ ಏಣಿ ಒದೆವವರು” ಎಂಬ ಸಾಲುಗಳು ಶೋಷಣೆ, ದ್ರೋಹ, ಕುತಂತ್ರಗಳನ್ನು ಬಿಚ್ಚಿಡುತ್ತವೆ.


---

ಹೃದಯಸ್ಪರ್ಶಿ ದೃಶ್ಯಗಳು

"ಹಂಸಪಕ್ಷ" ಕವಿತೆಯಲ್ಲಿ ಶೋಷಿತ ಸಮುದಾಯವು ಮರೆತು–ಮನ್ನಿಸಿ ಒಂದಾಗುವ ಮನೋಭಾವನೆ ಕಾಣುತ್ತದೆ.
"ಜೋಳದ ರಾಶಿ ಗುಡ್ಡ" ಕವಿತೆ ಗ್ರಾಮೀಣ ನೆನಪುಗಳು ಮತ್ತು ಇಂದಿನ ಯಾಂತ್ರಿಕ ಬದುಕಿನ ನಿರಾಸಕ್ತಿಯನ್ನು ತೋರ್ಪಡಿಸುತ್ತದೆ.
"ಕೂಗು ಮಾರಿ "ಜೀವನದ ಕ್ಷಣಿಕತೆಯನ್ನು ಕೂಗಿ ಹೇಳುತ್ತದೆ.
ಬಿಸಿಲೂರ ಬೆಡಗಿ ಪ್ರೇಮದ ಮೃದುವಾದ ಸ್ಪರ್ಶ ನೀಡುತ್ತದೆ.


---

ಸಾಮಾಜಿಕ ಪ್ರತಿಧ್ವನಿ

ಕವಳ ಕವಿತೆಯಲ್ಲಿನ “ಕಾಳಿಂಗಗಳು ಕುಟುಕುತ್ತಿವೆ, ರಕ್ತ ಕಾರಿದರು ಬಿಡದೆ” ಎಂಬ ಸಾಲುಗಳು ಶೋಷಣೆಯ ತೀವ್ರತೆಯನ್ನು ಎತ್ತಿ ತೋರಿಸುತ್ತವೆ.
ಸತ್ಯ ಜೀವಜಲ ಸ್ವಾರ್ಥದ ಜೀವನ ಜೈಲಿನ ಬಂಧನವಾಯಿತು ಎಂಬ ಸತ್ಯವನ್ನು ಅನಾವರಣಗೊಳಿಸುತ್ತದೆ.
ಮರಳು ಮನಸ್ಸೇ  ಕವಿತೆಯಲ್ಲಿ ಪ್ರಶ್ನೆ ಕೇಳುವ ನೆಪದಲ್ಲಿ ತಿದ್ದುವ, ಶಿಷ್ಯರಿಲ್ಲದೆ.ಸಾಲು ತುಂಬಾ ಇಷ್ಟವಾಗುತ್ತದೆ.
ನಮಗೊಮ್ಮೆ ಪಟ್ಟ ಕೊಟ್ಟು ನೋಡಿ ಕವಿತೆ ದಮನಿತರಿಗೂ ಅಧಿಕಾರ ಸಿಕ್ಕರೆ  ನವ ಸಮಸಮಾಜ ಕಟ್ಟುವ ಕನಸನ್ನು ಉಣಬಡಿಸುತ್ತದೆ.


--

ಡಾ. ಶಿವಣ್ಣ ತಿಮ್ಲಾಪುರ ಅವರ ಈ ಸಂಕಲನವು ದನಿ ಇಲ್ಲದವರ ದನಿಯಾಗಿ, ಶೋಷಿತರ ಬದುಕನ್ನು, ನೋವುಗಳನ್ನು, ಘನತೆಯನ್ನು ಓದುಗರ ಮುಂದಿರಿಸುತ್ತದೆ. ಈ ಕವಿತೆಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜದ ಹೃದಯವನ್ನು ತಟ್ಟುವ ನಿಜವಾದ ಸಾಕ್ಷಿಯಂತಿವೆ.

ಡಾ. ಶಿವಣ್ಣ ತಿಮ್ಲಾಪುರ 
ಅವರು ಇನ್ನೂ ಹೆಚ್ಚಿನ  ಸಾಹಿತ್ಯವನ್ನು ರಚಿಸಿ,ನೊಂದವರ ಕಣ್ಣೀರು ಒರೆಸಿ, ಶೋಷಿತರ ಪರವಾದ  ದನಿಯಾಗಲಿ ಎಂದು ಹಾರೈಸುತ್ತೇನೆ.

Popular posts from this blog

ಜೀವಿಯವರು ರಚಿಸಿದ ಹೃದಯದ ತಟ್ಟೆ ಕವಿತೆಯ ವಿಶ್ಲೇಷಣೆ

ಮರೆಯಾದ ದಂತಕಥೆ

jeevi news