ಗುರುತಿಸದ ಗುರುತುಗಳು
ಗುರುತಿಸದ ಗುರುತುಗಳು
ಹೆಸರಿಲ್ಲದ ಸಂಬಂಧಗಳು
ಅರಿಯದ ಅದೆಷ್ಟು ಸತ್ಯಗಳಿವೆ ಸೃಷ್ಟಿಯಲ್ಲಿ,
ತಿಳಿಯದ ಅದೆಷ್ಟೋ ಪದಗಳಿವೆ ಭಾಷೆಯಲ್ಲಿ,
ಹೆಸರಿಸದ ಅದೆಷ್ಟು ಭಾವಗಳಿವೆ ಬದುಕಲಿ,
ಕಾಣದದೆಷ್ಟು ಜೀವಿಗಳಿವೆ ಈ ಜಗದಲ್ಲಿ...
ಬಾಳ ಪಯಣದಲ್ಲಿ —
ಗುರುತಿಡದ ಹೆಜ್ಜೆಗಳಿವೆ ನಡಿಗೆಯಲಿ,
ಅರ್ಥವಾಗದ ಅನುಬಂಧಗಳಿವೆ ಬಾಳಿನಲಿ,
ಗೌರವಿಸದ ಗುರುತಿಸಿದ ಸಂಬಂಧಗಳಿವೆ ಹೃದಯದಲಿ...
ಅವು.....
ಬಂಧನವಿಲ್ಲದ ಬಾಂಧವ್ಯಗಳು,
ಒತ್ತಡವಿಲ್ಲದ ಒಲವುಗಳು,
ಹೆಸರಿಸದ ಸಹಜ ಸ್ಪಂದನಗಳು,
ನಿಯಮ ಮೀರಿದ ಮೌಲ್ಯಗಳು,
ಬದುಕ ದಾಟಿದ ನಿಷ್ಕಲ್ಮಷ ಆತ್ಮಗಳು...
ಆದರೆ...
ಭಯ ನಿರೀಕ್ಷೆಯಲ್ಲಿ ಮಂಕಾಗುತ್ತಿವೆ,
ಆತಂಕ ಅಪಕೀರ್ತಿಯಲ್ಲಿ ಬಾಡುತ್ತಿವೆ
ಬೇರುಗಳಿಲ್ಲದೆ ಬೂಟಾಟಿಕೆಗೆ ಬಲಿಯಾಗುತ್ತಿವೆ,
ಇವು ಕಾಣಲು ಬೇಕಾಗಿವೆ:
ಸೂಕ್ಷ್ಮ ಸಂವೇದನೆಯ ಕಣ್ಣುಗಳು,
ಅರಿಯಲು ಬೇಕು:
ವಿಶಾಲ ಹೃದಯದ ಹೃದಯವಂತಿಕೆ,
ಗುರುತಿಸಲು ಬೇಕು:
ಅಂತರಂಗದ ಆಳದ ನೋಡುಪು.
ಅವು ಪ್ರಬುದ್ಧತೆಗೆ ಮಾತ್ರ ಪ್ರಕಾಶಿಸುವ ಸಂಬಂಧಗಳು,
ಅವೇ ಗುರುತಿಸದ ಗುರುತುಗಳು –
ಬಾಳಿಗೆ ನಿಲುಕದ ನಿಜಗಳು.